ಮೈಸೂರಿನ ಊಟಿ ರಸ್ತೆ ಯಲ್ಲಿರುವ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಕಿರಿಯ ಪೀಠಾಧಿಪತಿಗಳಾದ ಶ್ರೀ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮಿಗಳ 23ನೇ ಚಾತುರ್ಮಾಸ್ಯ ವೈಭವವಾಗಿ ನೆರವೇರುತ್ತಿದ್ದು ಈ ನಿಮಿತ್ತ ಲೋಕ ಕಲ್ಯಾಣಕ್ಕಾಗಿ ಜರುಗುತ್ತಿರುವ ಶತ ಚಂಡಿಕಾ ಯಾಗವು ಮಹಾ ಪೂರ್ಣಾಹುತಿಯೊಂದಿಗೆ ಶ್ರೀಗಳ ಸಮಕ್ಷಮದಲ್ಲಿ ಸಂಪನ್ನವಾಹಿತು.

ಈ ನಿಮಿತ್ತ ಮೊದಲಿಗೆ ಗೋಪೂಜೆಯನ್ನು ಶ್ರೀಗಳು ನೆರವೇರಿಸಿದರು. ಬಳಿಕ ಸಾರ್ವತ್ರಿಕ ಪ್ರಾರ್ಥನಾ ಮಂದಿರದಿಂದ ಚಂಡಿ ಯಾಗ ಶಾಲೆಯವರೆಗೆ ಎಲ್ಲಾ ದೇವತೆಗಳೊಂದಿಗೆ ರಥ ಮತ್ತು ಪಲ್ಲಕಿ ಉತ್ಸವದೊಂದಿಗೆ ಕರೆತರಲಾಯಿತು. ತರುವಾಯ ಹೃತ್ವಿಕರ ವೇದ ಘೋಷಣೆಯೊಂದಿಗೆ ಶ್ರೀಗಳ ಘನ ಉಪಸ್ಥಿತಿಯಲ್ಲಿ ಪೂರ್ಣಾಹುತಿಯು ನೆರವೇರಿತು.ಇದೇ ಸಂದರ್ಭದಲ್ಲಿ ಸುಮಂಗಲಿ ಪೂಜೆ , ಕುಮಾರಿ ಪೂಜೆ, ಸುವಾಸಿನಿ ಪೂಜೆ ಹಾಗು ದಂಪತಿ ಪೂಜೆ ವಿಶೇಷವಾಗಿ ನೆರವೇರಿತು. ನಂತರ ಜರುಗಿದ ಶ್ರೀ ರಾಜರಾಜೇಶ್ವರಿ ದೇವಿಗೆ ಶತ ಚಂಡಿ ಕಲಶಗಳೊಂದಿಗೆ ಅಭಿಷೇಕ ಹಾಗು ಸಪ್ತರ್ಷಿ ಸರೋವರದಲ್ಲಿ ಅವಭೃತ ಸ್ನಾನವನ್ನುವೂ ನೆರವೇರಿತು. ನೂರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿ ವಿಶೇಷ ಹೋಮ ಪೂಜೆಯಲ್ಲಿ ಬಾಗಿಗಳಾಗಿ ಧನ್ಯರಾದರು.



