ಮೈಸೂರಿನ ಊಟಿ ರಸ್ತೆ ಯಲ್ಲಿರುವ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಕಿರಿಯ ಪೀಠಾಧಿಪತಿಗಳಾದ ಶ್ರೀ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮಿಗಳ 23ನೇ ಚಾತುರ್ಮಾಸ್ಯ ವೈಭವವಾಗಿ ನೆರವೇರುತ್ತಿದ್ದು ಮೊದಲಿಗೆ ಗೋಪೂಜೆಯನ್ನು ಶ್ರೀಗಳು ನೆರವೇರಿಸಿದರು.

ತರುವಾಯ ಶ್ರೀ ಚಕ್ರ ಪೂಜೆ ,ಶ್ರೀ ಜಯಲಕ್ಷ್ಮಿ ಮಾತಾ ಕಥಾ ಮಾಲಿಕೆಯನ್ನು ಶ್ರೀ ಪವನ್ ಮತ್ತು ತಂಡದಿಂದ ನೆರವೇರಿಸಿದರು. ಶ್ರೀ ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಆಶೀರ್ವಾದದೊಂದಿಗೆ ಲೋಕ ಕಲ್ಯಾಣಕ್ಕಾಗಿ ಮತ್ತು ಎಲ್ಲಾ ಮನುಕುಲಕ್ಕೆ ಆರೋಗ್ಯ ಕಲ್ಪಿಸಲೆಂದು ೧೧ ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಅಂಗವಾಗಿ ಸರ್ಕಾರಿ ಆಯುರ್ವೇದ ಸಂಶೋದನಾ ಕೇಂದ್ರ, ಮೈಸೂರು ವತಿಯಿಂದ ಮತ್ತು ಆಶ್ರಮದ ಸಂಯುಕ್ತ ಆಶ್ರಯದಲ್ಲಿ ಚರಕ ಜಯಂತಿ ಪ್ರಯುಕ್ತ ಚರಕ ಪಾರಾಯಣ ನೆರವೇರಿತು. ತದನಂತರ ಧನ್ವಂತರಿ ಹೋಮವನ್ನು ನಿರ್ವಹಿಸಿ ಶ್ರೀಗಳು ಪೂರ್ಣಾಹುತಿಯನ್ನು ನೆರವೇರಿಸಿದರು. ಬಳಿಕ ಧನ್ವಂತರಿಸ್ವಾಮಿಗೆ ಪ್ರತಿಷ್ಟಾಪಿತ ಕಲಶದಿಂದ ಅಭಿಷೇಕವನ್ನು ಮಾಡಲಾಯಿತು. ಸಂಜೆ ಪೌಂಡರೀಕಾ ಮಂಟಪದಲ್ಲಿ ಜರುಗಿದ ಧರ್ಮಸಭೆಯಲ್ಲಿ ಶ್ರೀ ವಿಷ್ಣುಪುರಾಣ ಕಥಾ ಮಾಲಿಕೆಯ ಕುರಿತಾಗಿ ಪ್ರವಚನವನ್ನು ಶ್ರೀಗಳು ನೀಡಿದರು. ಅಧಿಕ ಸಂಖ್ಯೆಯಲ್ಲಿ ಭಕ್ತಾದಿಗಳು ಮಠಕ್ಕೆ ಆಗಮಿಸಿ ವಿಷ್ಣುಪುರಾಣ ಕಥೆಯನ್ನ ಆಲಿಸಿ ಭಕ್ತಿ ಭಾವದಲ್ಲಿ ಲೀನರಾದರು.

































