ಮೈಸೂರು : ಮೈಸೂರಿನ ಊಟಿ ರಸ್ತೆ ಯಲ್ಲಿರುವ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಕಿರಿಯ ಪೀಠಾಧಿಪತಿಗಳಾದ ಶ್ರೀ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮಿಗಳ 23ನೇ ಚಾತುರ್ಮಾಸ್ಯ ವೈಭವವಾಗಿ ನೆರವೇರುತ್ತಿದ್ದು ಮೊದಲಿಗೆ ಶ್ರೀಗಳಿಂದ ಗೋಪೂಜೆ ನೆರವೇರಿತು.

ತರುವಾಯ ವಿಶ್ವ ಪ್ರಾರ್ಥನಾ ಮಂದಿರದಲ್ಲಿ ವಿಶೇಷವಾಗಿ ಹಯಗ್ರೀವ ಜಯಂತಿ ನೆರವೇರಿತು ಈ ನಿಮಿತ್ತ ಶ್ರೀ ಚಕ್ರ ಪೂಜೆಯೊಂದಿಗೆ ಸ್ವಾಮಿಗೆ ವಿಶೇಷ ಅಭಿಷೇಕ ಮತ್ತು ಪೂಜೆಯನ್ನ ಪರಮ ಪೂಜ್ಯರು ನೆರವೇರಿಸಿದರು. ಇದೇ ಸಂದರ್ಭದಲ್ಲಿ ವಿದ್ವಾನ್ ಪ್ರಜ್ವಲ್ ರಂಗರಾಜು ಮತ್ತು ತಂಡದಿಂದ ಪೂರ್ಣಿಮಾ ಸಂಗೀತ ಸೇವೆ ನೆರವೇರಿಸಿದರು. ಬಳಿಕ ಪವಮಾನ ಹೋಮ,ಪೂರ್ಣಾಹುತಿ ವಿಶೇಷವಾಗಿ ಜರುಗಿತು. ಸಂಜೆ ಪೌಂಡರೀಕಾ ಮಂಟಪದಲ್ಲಿ ಜರುಗಿದ ಧರ್ಮಸಭೆಯಲ್ಲಿ ಶ್ರೀ ವಿಷ್ಣುಪುರಾಣ ಕಥಾ ಮಾಲಿಕೆಯ ಕುರಿತಾಗಿ ಪ್ರವಚನವನ್ನು ಶ್ರೀಗಳು ನೀಡಿದರು. ಅಧಿಕ ಸಂಖ್ಯೆಯಲ್ಲಿ ಭಕ್ತಾದಿಗಳು ಮಠಕ್ಕೆ ಆಗಮಿಸಿ ವಿಷ್ಣುಪುರಾಣ ಕಥೆಯನ್ನ ಆಲಿಸಿ ಭಕ್ತಿ ಭಾವದಲ್ಲಿ ಲೀನರಾದರು.











